ಮುಂಡಕೋಪನಿಷತ್ತು
ದಶೋಪನಿಷತ್ತುಗಳ ಪೈಕಿ ಒಂದು. ಸಂನ್ಯಾಸ ಹಾಗೂ ಅಧ್ಯಾತ್ಮವನ್ನು ಕುರಿತದ್ದು. ಇಲ್ಲಿ ಉಕ್ತವಾದ ಬ್ರಹ್ಮಜ್ಞಾನವನ್ನು ಬ್ರಹ್ಮ ಮೊದಲ ತನ್ನ ಮಗ ಅಥರ್ವನಿಗೆ ಹೇಳಿದ ಅಥರ್ವ ಅದನ್ನು ಅಂಗಿಗೂ ಅಂಗಿ ಸತ್ಯವಹನಿಗೂ ಸತ್ಯವಹ ಅಂಗೀರಸನಿಗೂ ಅಂಗೀರಸ ಶೌನಕನಿಗೂ ಹೇಳಿದ್ದ. 

	ಈ ಉಪನಿಷತ್ತಿನ ಸಾರಸಂಗ್ರಹ ಹೀಗಿದೆ: ಯಜ್ಞ-ಯಾಗಾದಿಗಳನ್ನು ಇದು ಮೆಚ್ಚುವುದಿಲ್ಲ. ಇದರಲ್ಲಿ ಉಕ್ತವಾದ ವಿಶ್ವರಚನಾಕ್ರಮ ಸಾಂಖ್ಯ ಮತ್ತು ವೇದಾಂತದ ವಿಚಾರಗಳಿಂದ ತುಂಬಿದೆ. ಅನುಭಾವಕ್ಕೆ ಸ್ಫೂರ್ತಿಯನ್ನೀಯುವುದರಲ್ಲಿ ಈ ಉಪನಿಷತ್ತಿಗೆ ಸಮನಾದುದು ಬೇರೊಂದು ಇಲ್ಲ.

	ಪರಾ ಮತ್ತು ಅಪರಾವಿದ್ಯೆಗಳನ್ನು ಹೇಳಲಾಗಿದೆ. ಅಪರಾವಿದ್ಯೆ ಕೆಳಮಟ್ಟದ್ದು; ಪ್ರಪಂಚವನ್ನು ಕುರಿತದ್ದು, ವೇದಗಳು, ವ್ಯಾಕರಣ, ಶಬ್ದೋತ್ಪತ್ತಿ. ಛಂದಸ್ಸು, ಧ್ವನಿ, ಯಜ್ಞ ಯಾಗಾದಿಗಳ ಆಚರಣೆ, ಖಗೋಳಶಾಸ್ತ್ರ- ಇತ್ಯಾದಿ ವಿಷಯಗಳನ್ನು ಕುರಿತದ್ದು. ಪರಾವಿದ್ಯೆ ಮೇಲ್ಮಟ್ಟದ್ದು. ಆತ್ಮ ಅಥವಾ ಬ್ರಹ್ಮಜ್ಞಾನಕ್ಕೆ ಸಂಬಂಧಪಟ್ಟಿದ್ದು. ವ್ಯಕ್ತಿಸ್ವರೂಪದ ಹಾಗೂ ವ್ಯಕ್ತಿಸ್ವರೂಪವಲ್ಲದ ವಿಶ್ವಸೃಷ್ಟಿ ಕ್ರಮವನ್ನು ಈ ಉಪನಿಷತ್ತು ಸಾರುತ್ತದೆ.

	ಬ್ರಹ್ಮಸರ್ವವ್ಯಾಪಿ. ಆತ ಎಡದಲ್ಲಿದ್ದಾನೆ. ಬಲದಲ್ಲಿದ್ದಾನೆ. ಮೇಲಿದ್ದಾನೆ. ಕೆಳಗಿದ್ದಾನೆ. ಎಲ್ಲವೂ ಬ್ರಹ್ಮ. ಬ್ರಹ್ಮನೇ ಸರ್ವಶ್ರೇಷ್ಠ. ಬ್ರಹ್ಮ ಸ್ವಪ್ರಕಾಶಿತ. ಆಕಾಶವೇ ಆತನ ತಲೆ. ಸೂರ್ಯ-ಚಂದ್ರರು ಅವನ ಕಣ್ಣುಗಳು. ನಾಲ್ದೆಸೆಗಳು ಅವನ ಕಿವಿಗಳು. ವೇದಗಳು ಅವನ ವಾಣಿ. ಗಾಳಿ ಆತನ ಉಸಿರು. ವಿಶ್ವ ಆತನ ಹೃದಯ. ಆತನ ಪಾದಗಳಿಂದ ಪೃಥ್ವಿ ಉದಿಸಿತು.

	ಆತ್ಮ-ಪರಮಾತ್ಮರೆಂಬ ಬಂಗಾರದ ಗರಿಗಳುಳ್ಳ ಎಂದಿಗೂ ಪ್ರತ್ಯೇಕವಾಗದೆ ಎರಡು ಪಕ್ಷಿಗಳು ಒಂದೇ ಗಿಡದ ಟೊಂಗೆಗಳ ಮೇಲೆ ಕುಳಿತಿದೆ. ಮೊದಲನೆ ಪಕ್ಷಿ ಗಿಡದ ಸಿಹಿ ಹಾಗೂ ಕಹಿ ಹಣ್ಣುಗಳ ರುಚಿಯನ್ನು ನೋಡುತ್ತಿದೆ. ಎರಡನೆಯದು ಯಾವ ರುಚಿಯನ್ನೂ ನೋಡದೆ ಶಾಂತವಾಗಿದ್ದು ಸಾಕ್ಷೀಭಾವದಿಂದ ನೋಡುತ್ತಿದೆ.

	ವ್ಯಕ್ತಿ ತನ್ನ ನಿಜದೈವೀಸ್ವರೂಪ ಮರೆತು, ಅಹಂಕಾರದಿಂದ ಅವೃತ್ತನಾದಾಗ ನೋವನ್ನು ಅನುಭವಿಸುತ್ತಾನೆ. ದುಃಖಿಸುತ್ತಾನೆ. ತಾನು ಪೂಜಿಸುವ ದೇವರೆ ತನ್ನ ನಿಜ ಆತ್ಮ ಎಂಬ ಅರಿವು ಉಂಟಾದಾಗ ವ್ಯಕ್ತಿ ಪರಮಾತ್ಮನ ವೈಭವವನ್ನು ತಿಳಿದಾಗ ಆತನ ದುಃಖ ಹೊರಟುಹೋಗುತ್ತದೆ.

	ಪರಮಾತ್ಮನ ಅಥವಾ ಬ್ರಹ್ಮ ಇಂದ್ರಿಯ ಹಾಗೂ ಬುದ್ಧಿಗಳಿಂದ ಅಗ್ರಾಹ್ಯ. ಕಣ್ಣುಗಳು ಆತನನ್ನು ಕಾಣಲಾರವು. ವಾಣಿ ಆತನನ್ನು ಕುರಿತು ಹೇಳಲಾರದು. ಇಂದ್ರಿಯಗಳು ಆತನನ್ನು ಪಡೆಯಲಾರವು. ತಪಸ್ಸಿನಿಂದ ಯಜ್ಞಯಾಗಾದಿಗಳಿಂದ ಆತನನ್ನು ದೊರಕಿಸುವುದು ಅಸಾಧ್ಯ. ವೇದ-ಪಠಣದಿಂದ, ಬುದ್ಧಿಯ ಸೂಕ್ಷ್ಮತೆಯಿಂದ ಅಥವಾ ಅಭ್ಯಾಸದಿಂದ ಆತನನ್ನು ಅರಿಯೆವು. ಪರಮಾತ್ಮನನ್ನು ಅರಿಯಬೇಕಾದರೆ ಹೃದಯಶುದ್ಧಿ ಹಾಗೂ ಧ್ಯಾನ ಬೇಕು.

	ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಿದ ಮುನಿಗಳು ಆನಂದತುಂದಿಲರಾಗುವರು. ಸುಖಿಗಳಾಗುವರು. ಶಾಂತಮನಸ್ಕರಾಗುವರು. ಎಲ್ಲ ಕಾಮನೆಗಳಿಂದ ಮುಕ್ತರಾಗುವರು. ಸರ್ವವ್ಯಾಪಿಯಾದ ಪರಮಾತ್ಮನನ್ನು ಎಲ್ಲೆಲ್ಲಿಯೂ ಕಂಡು ಅವನ ಧ್ಯಾನದಲ್ಲಿ ಆಳವಾಗಿ ಮುಳುಗುವರು. ಅವನನ್ನೇ ಹೊಂದುವರು.						
	(ಕೆ.ಯು.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ